ಶ್ರೀರಂಗರಾಯ 3

	ವಿಜಯನಗರ ಸಾಮ್ರಾಜ್ಯದ ಕೊನೆಯ ಸಾಮ್ರಾಟ (1642-69). ಇವನ ಕಾಲಕ್ಕೆ ವಿಜಯನಗರ ಸಾಮ್ರಾಜ್ಯ ಕೇವಲ ನಾಮ ಮಾತ್ರವಾಗಿ ಉಳಿದಿತ್ತು.

	ಸಾಮ್ರಾಟನಾದರೂ ಸಾರ್ವಭೌಮತ್ವ ಸಂಶಯಾಸ್ಪದವಾಗಿಯೇ ಉಳಿಯಿತು. ಸಾಕಷ್ಟು ಸೈನ್ಯ ಮತ್ತು ಸಂಪನ್ಮೂಲಗಳ ಬಲವಿಲ್ಲದೆ ತನ್ನ ಸ್ಥಾನವನ್ನು ದೃಢಪಡಿಸಿಕೊಳ್ಳಲು ಹೋರಾಡಬೇಕಾದ ಪರಿಸ್ಥಿತಿ ಇವನಿಗಿದ್ದಿತು.  ಉತ್ತರದಲ್ಲಿ ಗೋಲ್ಕೊಂಡದ ಸುಲ್ತಾನ ಅರಾಜಕತೆಗೆ ಬಲಿಯಾಗಿದ್ದ ಹಿಂದು ಸಾಮ್ರಾಜ್ಯದಲ್ಲಿ ಸಿಕ್ಕಿದಷ್ಟು ಪಾಲು ಪಡೆಯಲು ಯತ್ನಿಸುತ್ತಿದ್ದ. ದಕ್ಷಿಣದಲ್ಲಿ ಮಧುರೆ, ಜಿಂಜಿ ಮತ್ತಿತರ ಕೆಲವು ಸಾಮಂತ ಪಾಳೆಯಪಟ್ಟುಗಳು ಸಾಮ್ರಾಜ್ಯದ ನೊಗ ಕಳಚಿದ್ದವು. ಇನ್ನೊಂದು ಕಡೆ ಮೈಸೂರು ಒಡೆಯರು ಮತ್ತು ಕೆಳದಿಯ ನಾಯಕರು ಸಾಮ್ರಾಜ್ಯಕ್ಕೆ ನಿಷ್ಠೆಯಿಂದ ಇದ್ದರೂ ತಮ್ಮ ಏಳಿಗೆಯನ್ನು ಸಾಧಿಸುವಲ್ಲಿ ಆಸಕ್ತರಾಗಿ ದ್ದರು. ಶ್ರೀರಂಗ ಬಿಜಾಪುರದ ಸಹಾಯದಿಂದ 1644ರಲ್ಲಿ ಗೋಲ್ಕೊಂಡ ನಡೆಸಿದ ದಾಳಿಯನ್ನು ತಡೆಯುವಲ್ಲಿ ಯಶಸ್ವಿಯಾದ. ಆದರೆ ಅದೇ ವೇಳೆಗೆ ಅವನು ಈಗಿನ ತಮಿಳುನಾಡಿನಲ್ಲಿದ್ದ ಸಾಮಂತರನ್ನು ತಹಬಂದಿಗೆ ತರಬೇಕಾಯಿತು. ತಂಜಾವೂರು, ಮಧುರೆ ಮತ್ತು ಜಿಂಜಿನಾಯಕರು ಶ್ರೀರಂಗನ ಪರಮಾಧಿಕಾರವನ್ನು ಧಿಕ್ಕರಿಸತೊಡಗಿದರು. ಶ್ರೀರಂಗ ಇವರನ್ನು ಹತ್ತಿಕ್ಕುವ ಪ್ರಯತ್ನಪಟ್ಟಿದ್ದಾಗಲೇ ಗೋಲ್ಕೊಂಡ ವಿಜಯನಗರದ ಮೇಲೆ ಪುನಃ 1645ರಲ್ಲಿ ಆಕ್ರಮಣ ಎಸಗಿತು. ಅದೇ ವರ್ಷ ಮಧುರೆ ಮತ್ತು ಜಿಂಜಿಯ ನಾಯಕರು ಶ್ರೀರಂಗನಿಗೆ ಭಾರಿ ಆಘಾತ ಉಂಟುಮಾಡಿ ದರು. ಶ್ರೀರಂಗರಾಯ ಮೈಸೂರು, ಕೆಳದಿ, ತಂಜಾವೂರು ಮೊದಲಾದ ಸಾಮಂತರ ಸಹಾಯದಿಂದ ಹೋರಾಡಿದ. ಆದರೆ 1646ರಲ್ಲಿ ಬಿಜಾಪುರ ಮತ್ತು ಗೋಲ್ಕೊಂಡದ ಸಂಯುಕ್ತ ಸೇನೆ ರಾಜಧಾನಿ ವೆಲ್ಲೂರನ್ನು ವಶಪಡಿಸಿಕೊಂಡಿತು. ಕೆಳದಿಯ ಶಿವಪ್ಪನಾಯಕ ನಿರಾಶ್ರಿತನಾದ ಶ್ರೀರಂಗನಿಗೆ ತನ್ನ ರಾಜಧಾನಿಯನ್ನು ಮರಳಿ ಪಡೆಯಲು ಸಹಾಯಮಾಡಿದ.  ಇದರಿಂದ ಶ್ರೀರಂಗ ಪುನಃ ಪೆನುಗೊಂಡ ಮತ್ತು ವೆಲ್ಲೂರುಗಳನ್ನು ಸ್ವಾಧೀನಪಡಿಸಿಕೊಂಡು ಕೆಲವು ವರ್ಷಗಳ ಕಾಲ ಆಳಿರಬಹುದೆಂದು 1646ರಿಂದ 1649ರ ವರೆಗಿನ ಶಾಸನಗಳಿಂದ ತಿಳಿದುಬರುತ್ತದೆ. ಆದರೆ ಪುನಃ ಗೋಲ್ಕೊಂಡದ ದಾಳಿಯಿಂದ ಇವನು 1649ರಲ್ಲಿ ಎರಡನೆಯ ಬಾರಿ ರಾಜಧಾನಿಯನ್ನು ತೊರೆಯಬೇಕಾಯಿತು. ಇದೇ ದಂಡಯಾತ್ರೆಯನ್ನು ಮುಂದುವರಿಸಿ ಗೋಲ್ಕೊಂಡದ ಸೈನ್ಯ ತಂಜಾವೂರು ಮತ್ತು ಜಿಂಜಿಗಳನ್ನು ನಾಶಮಾಡಿತು.

	ತರುವಾಯ ಶ್ರೀರಂಗ ಬೇಲೂರು ಮತ್ತು ಸಕ್ಕರೆಪಟ್ಟಣಗಳ ಪಾಳೆಯಪ ಟ್ಟುಗಳಲ್ಲಿ ಆಳಿಕೆ ನಡೆಸಿದ. (ಇತಿಹಾಸಕಾರರು) ಕೆಳದಿ ನಾಯಕರು ಶ್ರೀರಂಗನಿಗೆ ಈ ಪ್ರದೇಶಗಳನ್ನೂ ಕೊಟ್ಟರೆ ಅಥವಾ ಮೈಸೂರು ಒಡೆಯರು ಕೊಟ್ಟರೆ ಎಂಬುವಲ್ಲಿ ಭಿನ್ನಾಭಿಪ್ರಾಯ ತಳೆದಿದ್ದಾರೆ).  ಶ್ರೀರಂಗ 1665ರಲ್ಲಿ ಬೇಲೂರಿನಿಂದ ಚಂದ್ರಗಿರಿಗೂ ತರುವಾಯ ಪೆನುಗೊಂಡೆಗೂ ಹೋಗಿ 1669ರ ವರೆಗೂ ಆಳಿದನೆಂದು ಶಾಸನಗಳು ತಿಳಿಸುತ್ತವೆ. ಸು. 1686ರಲ್ಲಿ ಶ್ರೀರಂಗ ಮೃತನಾದ. ಇವನಿಗೆ ಮಕ್ಕಳೂ ಇರಲಿಲ್ಲವೆಂದು ತೋರುತ್ತದೆ. ಇವನ ಮರಣದಿಂದ ವಿಜಯನಗರ ಸಾಮ್ರಾಜ್ಯ ಅಸ್ತಂಗತವಾಯಿತು.					
	(ಡಿ.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ